ನಿರಶನತೆ
	ಯಾವುದೇ ಕಾರಣದಿಂದ ದೇಹಕ್ಕೆ ಆಹಾರಪೂರೈಕೆ ಆಗದಿರುವಿಕೆ. ಭೀಕರ ಬರಗಾಲ ಸನ್ನಿವೇಶಗಳಲ್ಲಿ ಉಣ್ಣಲು ಸಾಕಷ್ಟು ಆಹಾರ ವಸ್ತುಗಳು ಅಲಭ್ಯವಾದಾಗ ಇಲ್ಲವೇ ಪಚನಾಂಗಗಳಿಗೆ ಸಂಬಂಧಿಸಿದ ರೋಗಗಳಿಂದ ಅನ್ನರಸದ ಹೀರಿಕೆಗೆ ವ್ಯತ್ಯಯ ಉಂಟಾದಾಗ ಇಲ್ಲವೇ ಅನ್ನನಾಳದಲ್ಲಿ ಗಂತಿ ತಲೆದೋರಿ ಆಹಾರ ಜಠರ ಕರುಳುಗಳನ್ನು ಸೇರದಾದಾಗ ನಿರಶನತೆ ತಲೆದೋರುವುದು. ಬೊಜ್ಜಿನಿಂದ ಕೂಡಿದ ಸ್ಥೂಲ ದೇಹವನ್ನು ಕರಗಿಸಲು ಅಲ್ಪಕಾಲ ನಿರಶನತೆಯನ್ನು ಚಿಕಿತ್ಸಾವಿಧಾನವಾಗಿ ವಿಧಿಸುವುದುಂಟು. ಆತ್ಮಶುದ್ಧಿಗಾಗಿ ಅಥವಾ ಬೇಡಿಕೆಯ ಒತ್ತಾಯಕ್ಕಾಗಿ ನಿರ್ದಿಷ್ಟ ಅಥವಾ ಅನಿರ್ದಿಷ್ಟ ಕಾಲವಧಿ ನಿರಶನತೆಯನ್ನು ಕೈಗೊಳ್ಳುವುದಿದೆ. ಈ ಎಲ್ಲ ಸನ್ನಿವೇಶಗಳಲ್ಲಿ ದೇಹದಲ್ಲಿಯ ಕೊಬ್ಬು ಹಾಗೂ ಸ್ನಾಯು ಮತ್ತು ಇನ್ನೂ ಕೆಲವು ಅಂಗಗಳು ಸವಕಳಿ ಹೊಂದುತ್ತವೆ ಮತ್ತು ಕರಗಿ ಹೋಗುತ್ತವೆ. ರೋಗ ಸಂದರ್ಭಗಳಲ್ಲಿ ನಿರಶನತೆ ಉಂಟಾದರೆ ರೋಗದ ಮೂಲಭೂತ ಲಕ್ಷಣಗಳ ಜೊತೆಯಲ್ಲಿ ಪುಷ್ಟಿಹೀನತೆ ಮುಖ್ಯ ಲಕ್ಷಣವಾಗಿ ಪರಿಣಮಿಸುತ್ತದೆ. ದೀರ್ಘಾವಧಿ ಉಪವಾಸ ಕೈಗೊಂಡ ವ್ಯಕ್ತಿಗಳಲ್ಲಿಯೂ ಕಡ್ಡಾಯವಾಗಿ ಸೆರೆಯಲ್ಲಿ ಕೂಡಿ ಯೋಗ್ಯ ಆಹಾರ ನೀಡದೆ ಇರಿಸಿದ ವ್ಯಕ್ತಿಗಳಲ್ಲಿಯೂ ನಿರಶನತೆಯಿಂದ ಉಂಟಾದ ಅಂಗಕ್ರಿಯೆ ಬದಲಾವಣೆಗಳ ಮೇಲೆ ನಡೆಸಿದ ಅಧ್ಯಯನ ಈ ವಿಷಯದ ಮೇಲೆ ಬೆಳಕು ಚೆಲ್ಲಿದೆ.

	ಊತಕಗಳ ಸವಕಳಿ ನಿರಶನತೆಯ ಮುಖ್ಯ ಲಕ್ಷಣ. ನಿರಶನತೆಯಿಂದ ಮೃತ ಹೊಂದಿದ ವ್ಯಕ್ತಿಯ ಶವಪರೀಕ್ಷೆ ಮಾಡಿದಾಗ ಕೊಬ್ಬಿನ ಊತಕ ಎಲ್ಲೂ ದೃಷ್ಟಿಗೆ ಬೀಳುವುದಿಲ್ಲ. ಚರ್ಮ ಸಡಿಲಗೊಂಡಿರುತ್ತದೆ. ಕಂಕಾಲಕ್ಕೆ ಅಂಟಿಕೊಂಡಿರುವ ಸ್ನಾಯುಗಳು ತೀವ್ರತರ ಸವಕಳಿಯನ್ನು ತೋರ್ಪಡಿಸುವುವು. ಗುರುತ್ವಾಕರ್ಷಣೆಯನ್ನು ಅನುಸರಿಸಿ ಬಾವು ಗೋಚರಿಸುತ್ತದೆ. ಮಿದುಳನ್ನು ಹೊರತುಪಡಿಸಿ ಉಳಿದೆಲ್ಲ ಒಳ ಅಂಗಗಳೂ ಸವಕಳಿಯನ್ನು ತೋರ್ಪಡಿಸುವುವು. ಗಾತ್ರದಲ್ಲಿಯೂ ತೂಕದಲ್ಲಿಯೂ ಹೃದಯ ಕಿರಿದಾಗುವುದು. ಹೀಗೆ ಕುಗ್ಗಿದ ಹೃದಯ ಮೊದಲಿನ ಸ್ಥಿತಿಗೆ ಬರಲಾರದು, ಕರಳು ಸೊರಗುತ್ತದೆ; ಅದರ ಲೋಳೆಪೊರೆ ಮತ್ತು ಸ್ನಾಯುಗಳ ಅನುವಳಿಕೆಯಿಂದ ಅದು ತೆಳ್ಳಗಾಗಿ ಪಾರದರ್ಶಕವಾಗುತ್ತದೆ. ಇಂಥ ಕರುಳು ಯಾವುದೇ ಪುಷ್ಟಿಕರ ಅಂಶವನ್ನೂ ಹೀರಿಕೊಳ್ಳಲಾರದು. ಕುಗ್ಗಿಹೋದ ಲೋಳೆಪೊರೆಯ ಸಾಮಥ್ರ್ಯ ಪುನಶ್ಚೇತನ ಹೊಂದುವ ಸಾಧ್ಯತೆ ಕಡಿಮೆ.

	ಆಹಾರ ಪೂರೈಕೆ ನಿಲುಗಡೆಯಾದ ಪ್ರಾರಂಭಿಕ ಘಟ್ಟದಲ್ಲಿ ತೂಕದ ಇಳುವರಿ ತುಂಬ ಜಾಸ್ತಿ. ಆ ಕಾರ್ಯ ಅನಂತರ ನಿಧಾನಗೊಳ್ಳುವುದು. ಆಹಾರ ದೊರೆಯದ ಸನ್ನಿವೇಶದಲ್ಲಿ ದೇಹ ಅದನ್ನು ಒದಗಿಸಿಕೊಳ್ಳಲು ಅನೇಕ ಕ್ರಮಗಳನ್ನು ಕೈಗೊಳ್ಳುತ್ತದೆ; ದೇಹದ ಸವಕಳಿಯಿಂದಲೇ ಆಹಾರ ಸಾಮಗ್ರಿಗಳು ಒದಗುತ್ತವೆ. ಅಲ್ಲದೆ ಸವೆದ ಊತಕ ಕೋಶಗಳ ಉಪಾಪಚಯ ಕಾರ್ಯ ಮತ್ತು ಚಟುವಟಿಕೆಗಳು ಕುಗ್ಗುವುದರಿಂದ ಅವು ತಮ್ಮ ಜೀವಾಳ ಕಾರ್ಯವನ್ನು ಉಳಿಸಿಕೊಳ್ಳಲು ವ್ಯಯಿಸಬೇಕಾದ ಶಕ್ತಿಯ ಬೇಡಿಕೆಯನ್ನು ಕಡಿಮೆಮಾಡುತ್ತವೆ. ದೇಹ ಹಗುರಾಗುವುದರಿಂದ ಚಲನೆಗೆ ಬೇಕಾದ ಯಾಂತ್ರಿಕ ಸಾಮಥ್ರ್ಯ ಕುಗ್ಗುತ್ತದೆ. ಹೀಗಾಗಿ ಆಹಾರ ಪೂರೈಕೆ ಕಡಿಮೆ ಆದರೂ ನಡೆಯುತ್ತದೆ. ಜೊತೆಗೆ ದೇಹ ಅನಗತ್ಯ ಕಾರ್ಯಗಳನ್ನು ಕಡಿಮೆ ಮಾಡುವುದು. ದೊರಕುವ ಆಹಾರ ಪದಾರ್ಥ ಪರಿಮಿತ ಮೊತ್ತದಲ್ಲಿದ್ದಾಗ ಈ ರೀತಿಯ ಹೊಂದಾಣಿಕೆ ಮನುಷ್ಯನನ್ನು ಬದುಕಿಸಬಲ್ಲದು.

	ಸಾಮಾನ್ಯ ಗಾತ್ರ ಮತ್ತು ತೂಕದ ವ್ಯಕ್ತಿ ತನ್ನ ತೂಕದ ಶೇಕಡ 25 ಭಾಗವನ್ನು ಜೀವದ ಉಳಿವಿಕೆಗೆ ಯಾವ ತೊಂದರೆಯೂ ಇಲ್ಲದಂತೆ ಕಳೆದುಕೊಳ್ಳಬಲ್ಲ. ನಿರಶನದಿಂದಾಗುವ ಊತಕಗಳ ಸವಕಳಿ ದೇಹದ ರಾಸಾಯನಿಕ ರಚನೆಯಲ್ಲಿ ವ್ಯತ್ಯಾಸವನ್ನು ಉಂಟುಮಾಡುವುದು. ದೇಹದಲ್ಲಿಯ ಶರ್ಕರ, ಕೊಬ್ಬು, ಸಸಾರಜನಕ ಮತ್ತು ಖನಿಜಗಳ ಸಂಗ್ರಹ ಕುಗ್ಗಿ ಹೋಗುತ್ತದೆ. ಯಾವುದೇ ಆಹಾರವನ್ನು ಸೇವಿಸದ ಸಾಮಾನ್ಯ ವ್ಯಕ್ತಿ ದೈಹಿಕ ವ್ಯಾಯಾಮವನ್ನು ಮಾಡುತ್ತಿಲ್ಲದೆ ಸಾಮಾನ್ಯ ಚಟುವಟಿಕೆಯನ್ನೂ ಮಿತಗೊಳಿಸಿದ್ದರೆ ದಿನವೂ 1,600 ಕೆಲೊರಿ ಶಕ್ತಿಯನ್ನು ವ್ಯಯಿಸುತ್ತಾನೆ. ದೇಹದಲ್ಲಿ ಸಂಗ್ರಹವಾಗಿರುವ ಅತ್ಯಲ್ಪ ಮೊತ್ತದ ಶರ್ಕರಗಳು ದೇಹದ ಬೇಡಿಕೆಯನ್ನು ನಿರಶನ ಕಾಲದಲ್ಲಿ ಪೂರೈಸಲು ಅಸಮರ್ಥವಾಗುತ್ತವೆ. ಪ್ರಧಾನವಾಗಿ ಆತ ತನ್ನಲ್ಲಿ ಸಂಗ್ರಹಿತ ಕೊಬ್ಬನ್ನು ಮತ್ತು ಅಲ್ಪ ಮೊತ್ತದಲ್ಲಿ ಸಸಾರಜನಕವನ್ನೂ ಶಕ್ತಿಮೂಲವಾಗಿ ಬಳಸಿಕೊಳ್ಳಬೇಕಾಗುತ್ತದೆ. ಆ ಸಂಗ್ರಹ ಹೆಚ್ಚೆಂದರೆ 45ರಿಂದ 50 ದಿವಸಗಳಿಗೆ ಸಾಕಾದೀತು. ಮನುಷ್ಯ ನಿರಶನತೆಯಿಂದ ಸಾಯಲು ಕೆಲವು ಕಾಲ ಹಿಡಿಯುತ್ತದೆ.

	ಆರೋಗ್ಯವಂತ ವ್ಯಕ್ತಿ ಯಾವುದೇ ಆಹಾರವನ್ನು ತೆಗೆದುಕೊಳ್ಳದೆ 14 ದಿವಸಗಳ ಕಾಲ ಏನೂ ತೊಂದರೆ ಇಲ್ಲದೆ ಬದುಕಿರಬಲ್ಲ. ಅದು ಯಾವ ಅಂಗ ಕ್ರಿಯೆಯಲ್ಲೂ ಬದಲಾವಣೆ ಉಂಟುಮಾಡದು ಮತ್ತು ದೇಹಾರೋಗ್ಯದ ಮೇಲೆ ಯಾವ ಶಾಶ್ವತ ಪರಿಣಾಮವನ್ನೂ ಬೀರದು. ಆ ವೇಳೆ ಆತ ತನ್ನ ದೈನಂದಿನ ಶಕ್ತಿಗಾಗಿ ಸಂಗ್ರಹಿತ ಕೊಬ್ಬನ್ನೂ ಸಸಾರಜನಕವನ್ನೂ ಬಳಸಬೇಕಾಗುತ್ತದೆ. ಕೊಬ್ಬನ್ನು ರೂಪಾಂತರಗೊಳಿಸಿ ಸಕ್ಕರೆಯನ್ನು ಹೊಸತಾಗಿ ತಯಾರಿಸುವುದು ಈ ಕಾಲದಲ್ಲಿ ಜರಗುವುದಾದರೂ ಸ್ವತಃ ಕೊಬ್ಬಿನ ವ್ಯಯಕ್ಕೆ ಅಗತ್ಯ ಬೀಳುವಷ್ಟು ಸಕ್ಕರೆ ಉತ್ಪತ್ತಿ ಆಗುವುದಿಲ್ಲವಾದ್ದರಿಂದ ಕೀಟೋನ್ ವಿಷಮತೆ ಉಂಟಾಗುವುದು ಸಾಮಾನ್ಯ. ದಿವಸವೊಂದರ 100 ಗ್ರಾಮ್ ಶರ್ಕರ ಪದಾರ್ಥಗಳನ್ನು ವ್ಯಕ್ತಿನಿರಶನದ ವೇಳೆ ಸೇವಿಸಿದಲ್ಲಿ ಕೀಟೋನ್ ವಿಷಮತೆಯನ್ನು ತಪ್ಪಿಸಬಹುದು.

	ಮಿದುಳ ಚಟುವಟಿಕೆಗಳಿಗೆ ಅಧಿಕ ಮೊತ್ತದಲ್ಲಿ ಗ್ಲೂಕೋಸ್ ಬೇಕು. ಸಂಪೂರ್ಣ ನಿರಶನತೆಯಲ್ಲಿ ಇದು ಅಲಭ್ಯವಾಗುವುದರಿಂದ ಕೀಟೋ ಆಮ್ಲಗಳನ್ನು ದಹಿಸಿ ಆ ಶಕ್ತಿಯನ್ನು ಒದಗಿಸಬೇಕಾಗುತ್ತದೆ. ನಿರಶನತೆಯ ಪ್ರಾರಂಭಿಕ ಘಟ್ಟಗಳಲ್ಲಿ ತೂಕದ ಇಳುವರಿ ಜಾಸ್ತಿ; ಕೋಶಗಳ ಹೊರಗೆ ದ್ರವ ಗಾತ್ರ ಹೆಚ್ಚಿ ಬಾವು ತಲೆದೋರುತ್ತದೆ. ಬಾವಿಗೆ ಕಾರಣಗಳು ಅನೇಕ- ರಕ್ತದಲ್ಲಿ ಆಲ್ಬುಮಿನ್ ಅಂಶದ ಕೊರತೆ, ಕುಗ್ಗಿದ ಹೃದಯದಿಂದ ರಕ್ತದ ಹೊರಹೊಮ್ಮಿಕೆ ಕಡಿಮೆಯಾಗಿ ಅದರ ಒತ್ತಡ ತಗ್ಗುವುದು, ಮೂತ್ರಪಿಂಡದ ಸೋಸುಕಾರ್ಯ ವ್ಯತ್ಯಯವಾಗುವುದು ಇತ್ಯಾದಿ. ಕರಗುವಿಕೆಯ ಪರಿಣಾಮವಾಗಿ ಊತಕಗಳು ಮುರುಟಿ ಹೋಗುತ್ತವೆ. ಕುಗ್ಗಿದ ದೇಹಕ್ಕೆ ದೊಡ್ಡದಾಗುವ ಚರ್ಮ ಸಹಜವಾಗಿ ಸುಕ್ಕುಗಟ್ಟುವುದು. ರಸದೂತಗಳ ಸ್ರವಿಕೆಯ ಮೇಲೆ ನಿರಶನತೆಯ ಪ್ರಭಾವ ಅಷ್ಟಿಲ್ಲ. ಆದರೂ ಲೈಂಗಿಕ ರಸದೂತಗಳ ಮೊತ್ತ ವ್ಯತ್ಯಯದಿಂದ ಮುಟ್ಟು ನಿಲ್ಲುತ್ತದೆ. ಸ್ತನಗಳು ದೊಡ್ಡದಾಗುತ್ತವೆ. ಗಂಡಸರಲ್ಲಿ ಕಾಮ ಕುಂದುತ್ತದೆ, ಪಚನಾಂಗಗಳಲ್ಲಿ ಪಾಚಕ ಕಿಣ್ವಗಳ ತಯಾರಿಕೆ ಕುಗ್ಗಿ ಹೋಗುವುದರಿಂದ ಆಹಾರದ ಹೀರಿಕೆಗೆ ತೀವ್ರ ತೆರನಾದ ವ್ಯತ್ಯಯ ಉಂಟಾಗುತ್ತದೆ. ರಕ್ತದಲ್ಲಿ ಕೋಲಿನ್ ಎಸ್ಟರೇಸ್ ಪರಿಮಾಣ ಕುಗ್ಗುತ್ತದೆ. ನಿರಶನ ಕೈಗೊಂಡ ವ್ಯಕ್ತಿ ತೂಕದ ಇಳುವರಿ ಹೊಂದಿ ತೆಳ್ಳಗಾಗುತ್ತಾನೆ; ಚರ್ಮ ಸಡಿಲಗೊಂಡು ಮಡಿಕೆಗೊಳ್ಳುವುದು ಅದರ ಸೂಚನೆ. ಚರ್ಮ ತೆಳ್ಳಗಾಗಿ, ಒಣಗಿ ತನ್ನ ಪುಟಿತತೆಯನ್ನು ಕಳೆದುಕೊಳ್ಳುತ್ತದೆ. ಕೂದಲಿನ ಹೊಳಪು ಮಾಯವಾಗಿ ಅದು ಒಣಗುತ್ತದೆ. ಕಣ್ಣುಗಳು ಕಾಂತಿಹೀನಗೊಂಡು ಒಳಸೇರುತ್ತವೆ. ಕಣ್ಣುಗಳ ಸುತ್ತಲಿನ ಊತಕಗಳ ಸವಕಳಿಯಿಂದ ಅವು ಮತ್ತಷ್ಟು ಎದ್ದು ಕಾಣುತ್ತವೆ. ಮುಖ ಮುಂಡದ ಮೇಲೆ ಕಂದು ಕಲೆ ಗೋಚರಿಸುತ್ತದೆ. ಮಲಗಿಯೇ ಇದ್ದರೆ ಮುಖದ ಮೇಲೆ, ಎದ್ದು ಓಡಾಡುವಂತಿದ್ದರೆ ಹಿಮ್ಮಡಿ ಸುತ್ತಲೂ ಬಾವು ಗೋಚರಿಸುತ್ತದೆ. ರಕ್ತದ ಒತ್ತಡ ಇಳಿಯುತ್ತದೆ. ಸಂಕೋಚನ ಒತ್ತಡ 70 ಮಿಮೀನಷ್ಟು ಕೆಳಕ್ಕಿಳಿದಿರಬಹುದು; ವ್ಯಾಕೋಚನ ಒತ್ತಡವನ್ನು ನಿಖರವಾಗಿ ಅಳೆಯಲು ಬರುವುದಿಲ್ಲ. ಮಂದ ರಕ್ತಹೀನತೆ ತೋರಿಬರಬಹುದು. ಉಪಾಪಚಯ ಕ್ರಿಯೆ ಕಡಿಮೆ ಆಗುವುದರ ಫಲವಾಗಿ ಜೀವಸತ್ತ್ವಗಳ ಬೇಡಿಕೆ ಕುಗ್ಗುವುದರಿಂದ ಅವುಗಳ ನ್ಯೂನತೆ ಅಷ್ಟಾಗಿ ಗೋಚರಿಸದು. ಬೌದ್ಧಿಕ ಸಾಮಥ್ರ್ಯಕ್ಕೆ ಯಾವ ಭಂಗವೂ ತೋರದು. ಮನಸ್ಸು ತಿಳಿಯಾಗಿದ್ದರೂ ಅದನ್ನು ಒಂದೇ ವಿಷಯದ ಮೇಲೆ ಹೆಚ್ಚುಕಾಲ ಸಾಂದ್ರೀಕರಿಸಲು ಸಾಧ್ಯವಾಗದು. ಅನೇಕ ಸೋಂಕುರೋಗಗಳ ಬೆಳೆವಣಿಗೆ ತೋರಿಬರುವ ಸಾಧ್ಯತೆ ಉಂಟು. ಕರುಳು ಗ್ರಂಥಿಗಳು ಕುಗ್ಗಿ ಹೋಗಿರುವುದರಿಂದ ಮತ್ತು ಕರುಳಿನ ಭಿತ್ತಿ ಅನುವಳಿಕೆ ಹೊಂದಿರುವುದರಿಂದ ಅದು ಅನ್ನರಸವನ್ನು ಹೀರಲಾರದು. ನಿಲ್ಲದ ಭೇದಿ ಅಂತ್ಯ ಘಟ್ಟದಲ್ಲಿ ಮಾರಕ ಚಿಹ್ನೆಯಾಗಿ ಗೋಚರಿಸುತ್ತದೆ. ದ್ರವರೂಪಿ ಮಲದ ಮೂಲಕ ನೀರು ಮತ್ತು ಲವಣಗಳು ನಷ್ಟವಾಗಿ ಜೀವದ ಉಳಿವನ್ನು ಅಸಾಧ್ಯಗೊಳಿಸುತ್ತವೆ.

	ಆಹಾರ ಪುಷ್ಟಿಹೀನತೆಯ ಲಕ್ಷಣ ತೋರ್ಪಡಿಸುವವರು ಒಳ್ಳೆಯ ಆಹಾರ ಸೇವನೆಯಿಂದ ಬೇಗ ಚೇತರಿಸಿಕೊಳ್ಳುವರು ಮತ್ತು ತೂಕದ ಏರಿಕೆಯನ್ನು ತೋರ್ಪಡಿಸುವರು.  ಇದೇ ಮಾತನ್ನು ಸಂಪೂರ್ಣ ನಿರಶನತೆಯ ವ್ಯಕ್ತಿಗಳ ಬಗೆಗೆ ಹೇಳುವಂತಿಲ್ಲ ಇವರು ಏಕಾಏಕಿ ಗಟ್ಟಿ ಆಹಾರ ಸೇವಿಸಿದಲ್ಲಿ ಇವರಿಗೆ ಭೇದಿ ತಲೆದೋರೀತು, ದೇಹ ತಲ್ಲಣಿಸಿ ಸಾವು ಉಂಟಾಗಬಹುದು. ಇವರಿಗೆ ಪ್ರಾರಂಭದಲ್ಲಿ ಸುಲಭವಾಗಿ ಜೀರ್ಣವಾಗುವ ಕೆನೆ ತೆಗೆದ ಹಾಲು ಅಥವಾ ಪುಡಿಹಾಲನ್ನು ನೀಡಬೇಕು. ಇದರಲ್ಲಿ ಕೊಬ್ಬು ಇರುವುದಿಲ್ಲವಾದ್ದರಿಂದ ಇದನ್ನು ಪಚನ ಮಾಡುವ ಅಪೇಸ್ ಕಿಣ್ವದ ಆವಶ್ಯಕತೆ ತಲೆದೋರುವುದು. ಈ ರೀತಿ ಹಾಲನ್ನು ಪದೇ ಪದೇ ಸ್ವಲ್ಪ ಮೊತ್ತದಲ್ಲಿ ಸೇವನೆ ಮಾಡುವುದು ಮುಖ್ಯ. ಇದನ್ನು ದಕ್ಕಿಸಿಕೊಳ್ಳುವ ಸಾಮಥ್ರ್ಯ ಬಂದು ಶಕ್ತಿ ಬಂದ ಬಳಿಕ ದ್ರವರೂಪಿ ಆಹಾರ ವಸ್ತುವನ್ನೂ ಅನಂತರ ಗಟ್ಟಿಯಾದ ಆಹಾರವನ್ನೂ ಹಂತಹಂತವಾಗಿ ಸೇವಿಸಬೇಕು. ಈ ಕ್ರಮ ಶಕ್ತಿ ಕಳೆದುಕೊಂಡ ನಿರಶನ ವ್ಯಕ್ತಿಯನ್ನು ಪುನಶ್ಚೇತನಗೊಳಿಸುವುದು. ಪರಿಮಳದಿಂದ ಕೂಡಿದ ಉಣಿಸು ಹಸಿವೆಯನ್ನು ಪ್ರಚೋದಿಸುತ್ತದೆ.
(ಪಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ